ಹಚ್ಚೇವು ಕನ್ನಡದ ದೀಪ...

- ಡಿ. ಎಸ್. ಕರ್ಕಿ
ಹಚ್ಚೇವು ಕನ್ನಡದ ದೀಪ ||
ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ

ಬಹುದಿನಗಳಿಂದ ಮೈ ಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲಿಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು
ನಡು ನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರೆವ ತೆರೆದೇವು ಮನವ ಎರೆದೇವು ಒಲವ ಹಿಡಿ ನೆನಪ
ನರ ನರವನೆಲ್ಲಾ ಹುರಿಗುಳಿಸಿ ಹೊಸೆದು

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೋರೇವು
ಒಡಲೊಡಲ ಕೆಚ್ಚಿನ ಕಿಡಿಗಳನ್ನು ಗಡಿ ನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ ನಾಡೊಲವೆ ನೀತಿ ಹಿಡಿ ನೆನಪ
ಮನೆ ಮನೆಗಳಲ್ಲಿ ಮನ ಮನಗಳಲ್ಲಿ

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದು ಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯ ಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ ಪಡೆದೇವು ತಿರುಳ ಹಿಡಿ ನೆನಪ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ

Video link:
https://www.youtube.com/watch?v=3v4tzINHXpI
English lyrics:
http://www.madhurabhavageethegalu.blogspot.com/2012/10/hacchevu-kannadada.html

No comments:

Post a Comment

Note: Only a member of this blog may post a comment.