ಭಾರತಾಂಬೆಯೆ ಜನಿಸಿ...

- ಕುವೆಂಪು
ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ
ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು ತಾಯಿಯೇ ||

ರಾಣಿಯಂದದಿ ಮೆರೆವ ಸಿರಿತನವಿಹುದೋ ಏನೋ ಅರಿಯೆನು
ಕಾಮಧೇನುವಿನಂತೆ ಬಯಸಿದ ಫಲವ ಕೊಡುವೆಯೊ ಅರಿಯೆನು
ಎನ್ನ ಅಂಗಗಳೆಲ್ಲವು ನಿನ್ನ ಸೊಂಪನು ಬಲ್ಲವು
ನಿನ್ನ ಸಂಗವೆ ಪರಮ ಮಂಗಳವೆಂಬುದಿನಿತನು ಮರೆಯೆನು

ಕುಂದು ಕೊರತೆಗಳಿಹವು ನಿನ್ನೊಳು ಎಂಬುವಳಲನು ಬಲ್ಲೆನು
ಹಿಂದ ಕುಳಿತವಳೆಂಬ ನಿಂದೆಯ ಸಹಿಸಿ ನೊಂದಿಹೆ ಬಲ್ಲೆನು
ಆದರೊಲಿಯೆನು ಅನ್ಯರ, ಚಿನ್ನವೊಲಿದಿಹ ಧನ್ಯರ
ಕುಂದು ಕೊರೆತೆಗಳಿರಲಿ ಮಹಿಮಳು ನೀನೆ ಅನ್ಯರನೊಲ್ಲೆನು

ನಿನ್ನ ಕಂಗಳ ಪುಣ್ಯ ಕಾಂತಿಯೊಳೆನ್ನ ಕಂಗಳ ತೆರೆವೆನು
ನಿನ್ನ ಅಂಗದ ಮಂಗಳಾಂಗಣದಲ್ಲಿ ನಲಿಯುತ ಬೆಳೆವೆನು
ನಿನ್ನ ಮಹಿಮೆಯೇ ಬರೆವೆನು, ನಿನ್ನ ಹೆಸರನೆ ಕರೆವೆನು
ನಿನ್ನ ಸೇವೆಯೊಳಲಿಹ ಭಾಗ್ಯಕೆ ಸಕಲ ಭಾಗ್ಯವ ತೊರೆವೆನು  

English lyrics:
http://www.madhurabhavageethegalu.blogspot.com/2012/08/bharatambeye-janisi-ninnolu.html

No comments:

Post a Comment

Note: Only a member of this blog may post a comment.